ತುರ್ಕ್‍ಮೆನ್ ಸೋವಿಯೆತ್ ಸಮಾಜವಾದಿ ಗಣರಾಜ್ಯ
ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ಒಂದು ಗಣರಾಜ್ಯ. ತುರ್ಕ್‍ಮೆನಿಯ, ತುರ್ಕ್‍ಮೆನಿಸ್ತಾನ್ ಎಂದೂ ಇದಕ್ಕೆ ಹೆಸರುಗಳಿವೆ. ಮೆಡಿಟರೇನಿಯನ್ ಸಮುದ್ರದ ಅಕ್ಷಾಂಶದಲ್ಲೇ, ಆದರೆ ಯಾವುದೇ ಸಾಗರದಿಂದ ಬಲುದೂರಕ್ಕೆ, ಏಷ್ಯ ಖಂಡದೊಳಗೆ, ಸೋವಿಯತ್ ಒಕ್ಕೂಟದ ಅತ್ಯಂತ ದಕ್ಷಿಣ ತುದಿಯಲ್ಲಿದೆ.  ಉತ್ತರದಲ್ಲಿ ಮತ್ತು ಪೂರ್ವದಲ್ಲಿ ಕಜಾóಕ್ ಸೋವಿಯತ್ ಸಮಾಜವಾದಿ ಗಣರಾಜ್ಯ ಉಜ್óಬೆಕ್ ಸೋವಿಯತ್ ಸಮಾಜವಾದಿ ಗಣರಾಜ್ಯ. ದಕ್ಷಿಣದಲ್ಲಿ ಇರಾನ್ ಮತ್ತು ಅಫ್ಘಾನಿಸ್ತಾನ, ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರ - ಇವು ಇದರ ಮೇರೆಗಳು. ಸ್ಪೇನಿಗಿಂತ ಸ್ವಲ್ಪ ಚಿಕ್ಕದಾಗಿರುವ ಈ ದೇಶದ ವಿಸ್ತೀರ್ಣ 1,88,500 ಚಮೈ. (4,88,100ಚಕಿಮೀ). 1924ರ ಅಕ್ಟೋಬರ್ 27ರಂದು ಸ್ಥಾಪಿತವಾದ ಈ ಗಣರಾಜ್ಯದ ಜನಸಂಖ್ಯೆ 21,58,000 (1970) ರಾಜಧಾನಿ ಆಷ್ಕಬಾದ್.

ಭೌತಲಕ್ಷಣ : ತುರ್ಕ್‍ಮೆನಿಸ್ತಾನದ ಶೇ. 90ರಷ್ಟು ಭಾಗ ಮರುಭೂಮಿ. ಕಾರ ಕೂಮ್ ಪ್ರಪಂಚದ ಅತ್ಯಂತ ದೊಡ್ಡ ಮರುಭೂಮಿಗಳಲ್ಲೊಂದು. ಕಾರಕೂಮ್ ಎಂದರೆ ಕಪ್ಪು ಮರಳು ಎಂದು ಅರ್ಥ. ಅದು ಗಣರಾಜ್ಯದ ಮಧ್ಯಭಾಗವನ್ನೆಲ್ಲ ಆವರಿಸಿದೆಯಲ್ಲದೆ ಅಂಚಿನ ಪ್ರದೇಶಗಳಿಗೂ ಚಾಚಿಕೊಂಡಿದೆ. ತುರ್ಕ್‍ಮೆನಿಯಾದ ಐದನೆಯ ನಾಲ್ಕು ಭಾಗ ಮೈದಾನ. ಇದು ತುರಾನ್ ತಗ್ಗುನೆಲದ ದಕ್ಷಿಣ ಭಾಗ. ಈ ಮೈದಾನ ಉತ್ತರ ಮತ್ತು ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದ ಅವನತ ನೆಲವಾಗಿ ಇಳಿಯುತ್ತದೆ. ಪರ್ವತಗಳಿಗೂ ತಪ್ಪಲು ಬೆಟ್ಟಗಳೂ ಹೆಚ್ಚಾಗಿ ಇರುವುದು ಈ ದೇಶದ ದಕ್ಷಿಣ ಭಾಗದಲ್ಲಿ ಮಾತ್ರ. ಕೂಗಿ ಟಾಂಗ್‍ಟೌ ಮತ್ತು ಕಾಪೆಟ್ ದಾಗ್ ಶ್ರೇಣಿಗಳು ಪಾಮಿರ್ - ಆಲೈ ಪರ್ವತಗಳ ಕವಲುಗಳ. ಕೂಗಿ ಟಾಂಗ್‍ಟೌ ಶ್ರೇಣಿಯ ಅತ್ಯುನ್ನತ ಶಿಖರ ಐರಿಬಾಬ (10,291 ಅಡಿ). ಕಾಪೆಟ್ ದಾಗ್‍ನ ಶಾಹಶಾಹ ಶಿಖರ 9,652 ಅಡಿ ಎತ್ತರವಾಗಿದೆ. ಭೂವೈe್ಞÁನಿಕವಾಗಿ ಕಾಪೆಟ್ ದಾಗ್ ಶ್ರೇಣಿ ಈಚಿನದು. 1929 ಮತ್ತು 1948ರಲ್ಲಿ ಆದಂತೆ ಆಗಿಂದಾಗ್ಗೆ ಸಂಭವಿಸುವ ವಿನಾಶಕಾರಿ ಭೂಕಂಪಗಳಿಂದ ಇದು ಎಷ್ಟು ಅಸ್ಥಿರವೆಂಬುದು ವ್ಯಕ್ತವಾಗಿದೆ. 

    ತುರ್ಕ್‍ಮೆನಿಸ್ತಾನದಲ್ಲಿ ನೀರಿಗೆ ಕೊರೆತೆಯಿಲ್ಲ. ಇದರ ಮುಖ್ಯ ನದಿಗಳು ಆಮೂದಾರ್ಯ, ಟೆಜೆನ್, ಮುರ್ಗಾಬ್, ಮತ್ತು ಆಟ್ರೆಕ್. ಇವಲ್ಲದೆ ಅನೇಕ ಸಣ್ಣ ನದಿಗಳು ಇವೆ. ಆಮೂದಾರ್ಯ ನದಿ ಈ ದೇಶದ ಈಶಾನ್ಯ ಗಡಿಯ ಮೇಲೆ ಹರಿದು ಆರಲ್ ಸಮುದ್ರದತ್ತ ಸಾಗುತ್ತದೆ. ತುರ್ಕ್‍ಮೆನಿಸ್ತಾನದ ನದಿಗಳಲ್ಲಿ ಹರಿಯುವ ನೀರಿನ ವಾರ್ಷಿಕ ಮೊತ್ತ 210,00,00,000-230,00,00,000 ಘನ ಅಡಿ (6,00,00,000-6,50,00,000 ಘನ ಮೀಟರ್). ಆದರೆ ನದಿಗಳು ಹರಿಯುವ ಭೌಗೋಳಿಕ ಸನ್ನಿವೇಶವೂ ಅವುಗಳ ದಿಕ್ಕೂ ಕೃಷಿಯೋಗ್ಯ ನೆಲದ ಸನ್ನಿವೇಶಕ್ಕೆ ಅನುಗುಣವಾಗಿಲ್ಲ. ತುರ್ಕ್‍ಮೆನಿಸ್ತಾನದ ಮುಖ್ಯ ನದಿಗಳು ಬಹಳ ಮಟ್ಟಿಗೆ ಪೂರ್ವದಲ್ಲಿ ಹರಿಯುತ್ತವೆ.  ಆದರೆ ಅತ್ಯಂತ ಫಲವತ್ತಾದ ನೆಲ ಇರುವುದು ದಕ್ಷಿಣ, ಈಶಾನ್ಯ ಹಾಗೂ ಪಶ್ಚಿಮದಲ್ಲ. ಈ ಪ್ರದೇಶದ ಕೃಷಿಯೋಗ್ಯ ನೆಲವೆಲ್ಲ ಸಂಪೂರ್ಣವಾಗಿ ಇನ್ನೂ ಬಳಸಿಕೊಂಡಿಲ್ಲ.

ವಾಯುಗುಣ : ತುರ್ಕ್‍ಮೆನಿಸ್ತಾನದ ಸನ್ನಿವೇಶ, ಅದರ ಮೇಲ್ಮೈಲಕ್ಷಣ - ಇವುಗಳಿಂದಾಗಿ ಇಲ್ಲಿ ತೀವ್ರ ಖಂಡೀಯ ವಾಯುಗುಣವಿದೆ. ದಿನದಲ್ಲೂ ವರ್ಷದಲ್ಲೂ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳಾಗುತ್ತವೆ. ಅಲ್ಲಿಯ ಸರಾಸರಿ ಉಷ್ಣತೆ 570-610 ಈ (140-160 ಛಿ ) ಆಗಿದ್ದರೂ ಬೇಸಗೆಯಲ್ಲಿ ಅದು 950 ಈ (350 ಛಿ) ಗಿಂತ ಕೆಳಗೆ ಇಳಿಯುವುದು ಅಪರೂಪ. ಆಗ್ನೇಯ ಕಾರ ಕೂಮ್‍ನಲ್ಲಿ ನೆರಳಿನಲ್ಲಿಯ ಗರಿಷ್ಠ ಉಷ್ಣತೆ 1220 ಈ (500 ಛಿ) ಮುಟ್ಟುತ್ತದೆ. ಪ್ರಪಂಚದ ಗರಿಷ್ಠ ಉಷ್ಣತೆ ಮುಟ್ಟುವ ಲಿಬ್ಯನ್ ಮರುಭೂಮಿಯದಕ್ಕಿಂತ ಇದು ಕೇವಲ ಕೆಲವು ಡಿಗ್ರಿಗಳಷ್ಟು ಕಡಿಮೆ. ಆದರೆ ಚಳಿಗಾಲದಲ್ಲಿ ಆರ್ಕ್‍ಟಿಕ್ ಗಾಳಿ ತುರ್ಕ್‍ಮೆನಿಯವನ್ನು ತಲುಪಿದಾಗ ಇದರ ದಕ್ಷಿಣತಮ ಪಟ್ಟಣವಾದ ಕೂಷ್ಕದಲ್ಲಿ ಉಷ್ಣತೆ - 270 ಈ (-330 ಛಿ) ಗೆ ಇಳಿಯುತ್ತದೆ. ತುರ್ಕ್‍ಮೆನಿಯದಲ್ಲಿ  ಆದ್ರ್ರತೆ ತುಂಬ ಕಡಿಮೆ. ಸೋವಿಯತ್ ದೇಶದಲ್ಲಿ ತುರ್ಕ್‍ಮೆನಿಯದಲ್ಲೇ ವಾರ್ಷಿಕ ಅವಪಾತ ಅತ್ಯಂತ ಕಡಿಮೆ ಬೇಸಗೆಯಲ್ಲಿ ಮಳೆಯೇ ಇಲ್ಲವೆನ್ನಬಹುದು. ತಡೆಯಿಲ್ಲದೆ ಒಳನಾಡಿನ ಗಾಳಿ ಬೀಸುವುದರಿಂದಾಗಿ ಹವಾಗುಣ ವರ್ಷ ನಾನಾ ಋತುಗಳಲ್ಲಿ ಬಹಳಮಟ್ಟಿಗೆ  ವ್ಯತ್ಯಾಸವಾಗುತ್ತದೆ. ವಸಂತ ಋತುವಿನಲ್ಲಿ ಅಂಟ್ಲಾಂಟಿಕ್ ಮತ್ತು ಮೆಡಿಟೇರಿಯನಿಂದ ಬೀಸುವ ಬೆಚ್ಚನೆಯ ಗಾಳಿ ಸ್ವಲ್ಪಮಟ್ಟಿಗೆ ಮೋಡಗಳನ್ನು ಹೊತ್ತು ತಂದು ಮಳೆ ಸುರಿಸುತ್ತದೆ.

ಸಸ್ಯಪ್ರಾಣಿ ಜೀವನ: ಓಯಸಿಸ್, ಕಣಿವೆ ಮತ್ತು ಪ್ರಸ್ಥಭೂಮಿ ಪ್ರದೇಶಗಳನ್ನು ಬಿಟ್ಟರೆ ಉಳಿದಲ್ಲಿಯ ಸಸ್ಯಗಳು ಖಚಿತವಾಗಿ ಮರುಭೂಮಿಯ ಪ್ರರೂಪದವು. ಕಾಪೆಟ್ ದಾಗ್‍ನ ಕಣಿವೆಗಳಲ್ಲಿ ಕಾಡು ದ್ರಾಕ್ಷಿ, ಬಾದಾಮಿ, ಅಂಜೂರ ಮತ್ತು ಆಕ್ಷೋಟಗಳಿವೆ. ಹೊರತೆರದ ಇಳಿಜಾರುಗಳಲ್ಲಿಯ ಮರಗಳು ಜೂನಿಪರ್ ಗುಲ್ಮ ಮತು ಪಿಸ್ತಾ. ನದಿಗಳ ದಡಗಳಲ್ಲೂ ದ್ವೀಪಗಳಲ್ಲೂ ಕಪ್ಪು ಪಾಪ್ಲರ್, ನೀರುಹಬ್ಬೆ (ವಿಲೋ) ಜೊಂಡು. ಬೆತ್ತ ಮುಂತಾದವುಗಳ ಕಾಡುಗಳಿವೆ. 

ತುರ್ಕ್‍ಮೆನಿಸ್ತಾನದ ಪ್ರಾಣಿಗಳು ವಿಶೇಷವಾಗಿ ಮರುಭೂಮಿಯವು. ಸ್ಟೆಪ್ (ಹುಲ್ಲುಗಾಡು) ಗುಳ್ಳನರಿ, ಪರ್ಷಿಯನ್ ಗುಳ್ಳನರಿ, ಕಾಡುಬೆಕ್ಕು, ಕಾರ ಕೂಮ್  ಗೆಜೆóಲ್ ಮತ್ತು ಆಮೆ. ಪರ್ವತಪ್ರದೇಶದಲ್ಲಿ ಪರ್ವತ ಟಗರು, ಆಡು, ಚಿರತೆ, ಲಿಂಕ್ಸ್, ಹಿಮಚಿರತೆ, ಮುಳ್ಳುಹಂದಿ, ನರಿ, ಕಾಡು ಹಂದಿ ಮತ್ತು ನಾನಾ ಬಗೆಯ ಹಕ್ಕಿಗಳು ಇವೆ. ಆಮೂ ದಾರ್ಯದ ದಂಡೆಯ ಮೇಲೆ ವಿರಳವಾದ ಎಳೆಗೆಂಪು ಜಿಂಕೆಗಳೂ ಇವೆ. ನೈಋತ್ಯದಲ್ಲಿ ಬಾಡ್‍ಖಿಜ್ó ಮತ್ತು ಕಾರಾಬಿಲ್ ಪ್ರಥಭೂಮಿಗಳಲ್ಲಿ ಕಾಡುಕತ್ತೆಗಳು ಅಡ್ಡಾಡುತ್ತವೆ. ಕ್ಯಾಸ್ಪಿಯನ್ ಸಮುದ್ರದ ಪೂರ್ವತೀರಕ್ಕೆ ಚಳಿಗಾಲದಲ್ಲಿ ಬಾತುಕೋಳಿ, ಹಂಸ, ಹೆಬ್ಬಾತು ಮುಂತಾದ ಪಕ್ಷಿಗಳು ಗುಂಪುಗುಂಪಾಗಿ ಉತ್ತರದಿಂದ ಹಾರಿಬರುತ್ತವೆ. ಕ್ಯಾಸ್ಪಿಯನ್ ಸಮುದ್ರದ ಪೂರ್ವ ಭಾಗದಲ್ಲೂ ಆಮೂದಾರ್ಯದಲ್ಲೂ ಅದರ ಸರೋವರಗಳಲ್ಲೂ ಹಲವು ಬಗೆಯ ಮೀನುಗಳಿವೆ. 

ಜನ : ತುರ್ಕ್‍ಮೆನಿಯದ ಜನಸಂಖ್ಯೆಯಲ್ಲಿ ಜನನ ದರ ಹೆಚ್ಚು, ಮರಣದರ ಕಡಿಮೆ. ಆದ್ದರಿಂದ ಜನಸಂಖ್ಯೆ ಏರುತ್ತಿದೆ. ಇದೊಂದು ಬಹು ರಾಷ್ಟ್ರಿಕ ರಾಜ್ಯ. ಪ್ರಮುಖ ರಾಷ್ಟ್ರಿಕರು ತುರ್ಕ್‍ಮೆನರು (66%). ಇತರರು ರಷ್ಯನರು (15%), ಉಜûಬೆಕರು (8.3%), ಕಜಾóಕರು (3.2%), ತಾತಾರರು ಉಕ್ರೇನಿಯನರು, ಆರ್ಮೇನಿಯರು, ಆಜûರ್‍ವೈಜಾನೀಯನರು ಮತ್ತು ಕಾರಾ ಕಲ್ಪಾಕರು, ರಾಜ್ಯದಲ್ಲಿ ಜನಸಂಖ್ಯೆಯ ವಿತರಣೆ ಅಸಮವಾದ್ದು. ಸರಾಸರಿ ಜನಸಾಂದ್ರತೆ ಚ, ಮೈ, ಗೆ 11.4 ಜನ ಇಡೀ ಸೋವಿಯತ್ ಒಕ್ಕೂಟದ ಸರಾಸರಿ ಜನಸಾಂದ್ರತೆಗಿಂತ ಇಲ್ಲಿಯದು ಬಲು ಕಡಿಮೆ.

ತುರ್ಕ್‍ಮೆನ್ ಗಣರಾಜ್ಯದ ಭಾಷೆ ತುರ್ಕ್‍ಮೆನ್. ಇದು ತುರ್ಕಿಕ ಭಾಷೆಗಳ ಆಗ್ನೇಯ ಗುಂಪಿನ ಭಾಷೆ. ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ, ತುರ್ಕ್‍ಮೆನ್. ರಷ್ಯನ್ ಭಾಷೆಯನ್ನೂ ಕಲಿಸುತ್ತಾರೆ. ತುಕ್‍ಮೆನಿಸ್ತಾನದ ಸಾಂಪ್ರದಾಯಿಕ ಇಸ್ಲಾಮೀ ಶೈಲಿ ಅಲ್ಲಿಯ ವಾಸ್ತುಶಿಲ್ಪ, ಸಾಹಿತ್ಯ, ಸಂಗೀತಗಳಲ್ಲಿ ಪ್ರತಿಬಿಂಬಿಸಿವೆ.

ಇತಿಹಾಸ : ಪಾರ್ಥಿಯದ (ಕಿ. ಪೂ 3ನೆಯ ಶತಮಾನ) ರಾಜಧಾನಿ ನಿಸ್ಸಾ ಹಾಗೂ ಜೆಂಗಿಸ್‍ಖಾನನ ಮಗನಿಂದ ನಾಶವಾದ ಖುರಾಸಾನ್ ದೇಶದ ಹಳೆಯ ರಾಜಧಾನಿ ಮರ್ವ - ಇವುಗಳ ಅವಶೇಷಗಳು ಟರ್ಕ್‍ಮೆನಿಯ ಪ್ರಾಚೀನ ನಾಗರೀಕತೆ ಕುರುಹುಗಳು. 10ನೆಯ ಶತಮಾನದಿಂದ ಈ ಪ್ರದೇಶ ತುರ್ಕಿ ಬಣಗಳ ನೆಲೆಯಾಗಿತ್ತು. ಅವುಗಳಲ್ಲಿ ಪ್ರಮುಖವಾದ್ದು ಟೆಕ್ಕೆ ಬಣ. 19ನೆಯ ಶತಮಾನದಲ್ಲಿ ಇದನ್ನು ರಷ್ಯ ಆಕ್ರಮಿಸುವ ವರೆಗೆ ಇಲ್ಲಿಯ ಜನ ಅಲೆಮಾರಿಗಳಾಗಿದ್ದರು. ರಷ್ಯದ ಅಲೆಗ್ಜಾóಂಡರ್ ಬೆಕೊವಿಚ್ ಚೆರ್ಕಸಿ 1717ರಲ್ಲಿ ದಂಡೆತ್ತಿ ಬಂದು ಈ ಪ್ರದೇಶವನ್ನು ಆಕ್ರಮಿಸಿಕೊಳ್ಳಲಾಗದೆ ಸೋತು ಹಿಂದಿರುಗಿದ. ಆದರೆ 1869ರಲ್ಲಿ ರಷ್ಯನ್ನರು ಕ್ಯಾಸ್ಪಿಯನ್ ಸಮುದ್ರದ ಪೂರ್ವ ಅಂಚಿನಲ್ಲಿ ಕ್ರಾಸ್ನವೊದ್‍ಸ್ಕ್ ಬಂದರನ್ನು ಸ್ಥಾಪಿಸಿದರು. ಟ್ರಾನ್ಸ್ ಕ್ಯಾಸ್ಪಿಯನ್ ಸೈನಿಕ ಜಿಲ್ಲೆಯ ರಚನೆ 1874ರಲ್ಲಿ ಆಯಿತು. ಅದು 1881ರಲ್ಲಿ ಒಂದು ಅಬ್ಲಾಸ್ಟ್ ಆಗಿ ಮಾರ್ಪಟ್ಟಿತು. 1899ರಲ್ಲಿ ತುರ್ಕಿಸ್ತಾನದ ಭಾಗವಾಗಿ ಸೇರಿತು. ರಷ್ಯದ ಆಕ್ರಮಣದ ವಿರುದ್ದವಾಗಿ ತೀವ್ರ ಪ್ರತಿಭಟನೆಯನ್ನು ಜನರಲ್ ಮಿಖೇಳ್ ಡಿಮಿಟ್ರಿವಿಚ್ ಸ್ಕೋಬೆಲೆಫ್ ಅಂತಿಮವಾಗಿ ಬಲಪ್ರಯೋಗದಿಂದ  ನಿಲ್ಲಿಸಿದ (1881). 1916ರ ಕ್ರಾಂತಿಯಲ್ಲಿ ತುರ್ಕ್‍ಮೆನ್ ಜನ ರಷ್ಯದ ಆಡಳಿತದ ವಿರುದ್ದ ನಿಂತರು. 1917ರಲ್ಲಿ ಬೋಲ್ಷೆವಿಕ್ ಕ್ರಾಂತಿ ವಿಜಯ ಹೊಂದಿತು. 1919-20ರಲ್ಲಿ ಆಷ್ಕಬಾದ್, ಕ್ರಾಸ್ನವೋದ್‍ಸ್ಕ್ ನಗರಗಳು ಕೆಂಪು ಸೇನೆಯ ವಶವಾದವು. ಬೋಲ್ಷೆವಿಕ್ ಕ್ರಾಂತಿಪಕ್ಷದ ಆಡಳಿತ ಆರಂಭವಾಯಿತು. ಟ್ರಾನ್ಸ್ ಕ್ಯಾಸ್ಪಿಯನ್ ಅಬ್ಲಾಸ್ಟ್ 1924ರ ವರೆಗೆ ತುರ್ಕಿಸ್ತಾನ್ ಸ್ವಯಂಆಡಳಿತ ಸೋವಿಯತ್ ಸಮಾಜವಾದಿ ಗಣರಾಜ್ಯದ ಭಾಗವಾಗಿತ್ತು. ತುರ್ಕ್‍ಮೆನಿಯದ ಉಳಿದ ಜಿಲ್ಲೆಗಳು 1920ರಲ್ಲಿ ಸ್ಥಾಪಿತವಾದ ಬೋಖಾರ ಮತ್ತು ಖೊರೆಜ್ಮಿಯನ್ ಮತ್ತು ಸೋವಿಯತ್ ಸಮಾಜವಾದಿ ಗಣರಾಜ್ಯಗಳಲ್ಲಿ ವಿಲೀನಗೊಂಡವು. ಹಿಂದಿನ ಖೊರೆಜ್ಮಿಯನ್ ಮತ್ತು ಬುಖಾರ ಗಣರಾಜ್ಯಗಳ ತುರ್ಕ್‍ಮನ್ ಪ್ರದೇಶಗಳನ್ನು ಸೇರಿಸಿ 1924ರಲ್ಲಿ ತುರ್ಕ್‍ಮೆನ್ ಸೋವಿಯತ್ ಸಮಾಜವಾದಿ ಗಣರಾಜ್ಯವನ್ನು ಸ್ಥಾಪಿಸಲಾಯಿತು. 1948ರಲ್ಲಿ ಸಂಭವಿಸಿದ ಭೂಕಂಪದಿಂದ ಆಷ್ಕಬಾದ್ ಹಾಗೂ ಗಕ್ ಟಪೇ ಪ್ರದೇಶಗಳಿಗೆ ತುಂಬ ನಷ್ಟವಾಯಿತು.

ಸರ್ಕಾರ : ಎಲ್ಲ ಸೋವಿಯತ್ ಗಣರಾಜ್ಯಗಳಂತೆಯೇ ಇಲ್ಲಿಯ ಸರ್ಕಾರವೂ ರಚಿತವಾಗಿದೆ. ಪರಮಾಧಿಕಾರ ಇರುವುದು ಸುಪ್ರೀಂ ಸೋವಿಯತ್‍ನಲ್ಲಿ ರಾಜ್ಯದ ಮಂತ್ರಿಮಂಡಲ ಅದಕ್ಕೆ ಅಧೀನ. ಸರ್ಕಾರದ ಎಲ್ಲ ವ್ಯವಹಾರಗಳೂ ಸಾಮಾಜಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳೂ ಕಮ್ಯೂನಿಸ್ಟ್ ಪಕ್ಷದಿಂದ ನಿಯಂತ್ರಿತವಾಗಿರುತ್ತದೆ. ತುರ್ಕ್‍ಮೆನಿಯ  ಪೂರ್ಣ ಪರಮಾಧಿಕಾರವುಳ್ಳ ರಾಜ್ಯವೆಂದು ಪರಿಗಣಿತವಾಗಿದ್ದರೂ ಅದಕ್ಕೆ ಪ್ರತ್ಯೇಕ ರಾಯಭಾರ ಅಥವಾ ರಾಜ್ಯ ಪ್ರಾತಿನಿಧ್ಯ ವ್ಯವಸ್ಥೆಯಿಲ್ಲ. 

ಶಿಕ್ಷಣ : 1930ರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಡ್ಡಾಯ, 1951ರಲ್ಲಿ ಪ್ರತ್ಯೇಕ ವಿe್ಞÁನ ಅಕಾಡೆಮಿ ಸ್ಥಾಪನೆಯಾಯಿತು. 1972ರಲ್ಲಿ 1,646 ವಿವಿಧ ಶಿಕ್ಷಣ ಶಾಲೆಗಳಿದ್ದುವು. ವಿದ್ಯಾರ್ಥಿಗಳ ಸಂಖ್ಯೆ 5,85,000

ಆರ್ಥಿಕತೆ : ಕೃಷಿ : ಈ ರಾಜ್ಯ ವ್ಯವಸಾಯಪ್ರಧಾನವಾದದ್ದು. ಇಲ್ಲಿಯ ವಾಯುಗುಣ ಹತ್ತಿಯ ಬೆಳೆಗೆ ಅನುಕೂಲವಾಗಿದೆ. ಉತ್ತಮ ಗುಣದ ಹತ್ತಿ ಆಮೂ ದಾರ್ಯ ಕಣಿವೆಯಲ್ಲೂ ಕಾಪೆಟ್ ದಾಗ್ ಪರ್ವತ ತಪ್ಪಲಲ್ಲೂ ಬೆಳೆಯುತ್ತದೆ. ಇತರ ಪ್ರಮುಖ ಬೆಳೆಗಳು ಗೋಧಿ, ಬಾರ್ಲಿ, ಮುಸುಕಿನ ಜೋಳ, ಮಿಲೆಟ್, ಹೊಗೆಸೊಪ್ಪು. ಕಲ್ಲಂಗಡಿ ಮತ್ತು ದ್ರಾಕ್ಷಿ.

ಕಾರ್‍ಕುಲ್ ಕುರಿಯನ್ನು ಎಲ್ಲೆಡೆಯಲ್ಲೂ ಸಾಕುತ್ತಾರೆ. ಇತರ ಸಾಕುಪ್ರಾಣಿಗಳು ದನ, ಹಂದಿ ಆಡು. ಸೋವಿಯತ್ ದೇಶದ ಒಟ್ಟು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಶೇ. 10 ರಷ್ಟು ಬೆಳೆಯುವುದು ತುರ್ಕ್‍ಮೆನಿಸ್ತಾನದಲ್ಲಿ.

ಗಣಿಗಾರಿಕೆ, ಕೈಗಾರಿಕೆ : ಸೋವಿಯತ್ ದೇಶದ ತೈಲೋತ್ಪಾದಕ ಗಣರಾಜ್ಯಗಳಲ್ಲಿ ತುರ್ಕ್‍ಮೆನಿಸ್ತಾನದ್ದು 3ನೆಯ ಸ್ಥಾನ. ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಮತ್ತು ಆಜûರ್‍ಬೈಜಾನ್ ಸೋವಿಯತ್ ಸಮಾಜವಾದಿ ಗಣರಾಜ್ಯಗಳು ಮೊದಲನೆಯ ಎರಡು ಸ್ಥಾನ ಪಡೆದಿವೆ. ಮುಖ್ಯ ತೈಲ ಕ್ಷೇತ್ರಗಳು ಇರುವುದು ನೆಬೀಟ್ - ದಾಕ್, ಕೂಮ್ ದಾಕ್. ಮತ್ತು ಚೆಲೆಕೆನ್‍ಗಳಲ್ಲಿ. ಕಾರ ಕೂಮ್ ಮರುಭೂಮಿ ಮತ್ತು ಗೌರ್ ದಾಕ್‍ನಲ್ಲಿ ಗಂಧಕವನ್ನೂ ಖ್ರೆಬೆಟ್ ಕುಗಿಟಾಂಗ್‍ಟೌನಲ್ಲಿ ಸೀಸವನ್ನೂ ತೆಗೆಯುತ್ತಾರೆ. ಕಿಝಿóಲ್ ಆರ್ವಾತ್‍ನಲ್ಲಿ ರೈಲ್ವೆ ದುರಸ್ತಿ ಕಾರ್ಯಾಗಾರವೂ ಕ್ರಾಸ್ನವೋದ್ಸ್‍ಕ್ ಮತ್ತು ಚಾರ್ಜೋಗಳಲ್ಲಿ ಹಡಗು ದುರಸ್ತಿಕೇಂದ್ರಗಳೂ ಇವೆ. ಟಾಷಾವ್ರeóï, ಚಾರ್ಜೋ, ಕೆರ್ಕೀಚೀ, ಬೇರಾಮ್ - ಆಲಿ, ಮೇರಿ, ಟೆಜಿನ್, ಐಯೊಲೋಟಾನ್ ಮತ್ತು ಕಲೀನಿನ್ ಹತ್ತಿ ಹಿಂಜುವ ಕೇಂದ್ರಗಳು ಆಷ್ಕಬಾದ್ ಮತ್ತು ಚಾರ್ಜೋಗಳಲ್ಲಿ ರೇಷ್ಮೇ ಹುರಿ ಮಾಡುವ ಗಿರಣಿಗಳಿವೆ. ರಾಜ್ಯದಲ್ಲಿ ಮೀನು ಮತ್ತು ಮಾಂಸ ಡಬ್ಬೀಕರಣ ಕೈಗಾರಿಕೆಗಳೂ ಇವೆ.

ಸಾರಿಗೆ ಸಂಪರ್ಕ : ಕ್ರಾಸ್ನೊವಿದ್ಸ್‍ಕ್ -ತಾಷ್ಕೆಂಟ್ ಮುಖ್ಯ ರೈಲು ಮಾರ್ಗ ಈ ರಾಜ್ಯವನ್ನು ಹಾದುಹೋಗುತ್ತದೆ. ವಿಷ್ಕ, ಕೊಷ್ಕ, ಕುನ್‍ಗ್ರಾಡ್ ಸಾಮ್ಸೊ ನೋವೊಗಳಿಗೆ ಇದರ ಶಾಖಾ ಮಾರ್ಗಗಳಿವೆ. ಕ್ರಾಸ್ನೊವಿದ್ಸ್‍ಕ್ ದಿಂದಲೂ ಆಮೂ ದಾರ್ಯ ನದಿಯ ಮೇಲೂ ಹಡುಗುಗಳು ಸಂಚರಿಸುತ್ತವೆ. ಆಮೂದಾರ್ಯದ ಮುಖ್ಯ ಬಂದರು ಚಾರ್ಜೋ, ತುರ್ಕ್‍ಮೆನಿಸ್ತಾನದಲ್ಲಿ 6,400 ಕಿಮೀ. (4,000 ಮೈ) ರಸ್ತೆಗಳಿವೆ. ಲೆನಿನ್‍ಸ್ಕಿ, ಟಾಷಾವೊಜ್ó ಆಷ್ಕವಾದ್‍ಗಳಿಂದ ವಿಮಾನಗಳು ಹಾರುತ್ತವೆ.
                                                        (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ